ಬಾಯ್ಲ್, ರಾಬರ್ಟ್
1627-91. ಬ್ರಿಟಿಷ್ ರಸಾಯನ ಮತ್ತು ಭೌತ ವಿಜ್ಞಾನಿ. ಜನನ ಐರ್ಲೆಂಡ್, 25-1-1627. ಮರಣ ಲಂಡನ್ 30-12-1691 ತಂದೆಯ ಹದಿನಾಲ್ಕು ಮಕ್ಕಳಲ್ಲಿ ಒಬ್ಬನಾಗಿ ವಯಸ್ಸಿಗೆ ಮೀರಿದ ಪ್ರಚಂಡ ಬುದ್ಧಿ ಪ್ರದರ್ಶಿಸಿದ. ಎಂಟರ ಈ ಎಳೆಯ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಸರಾಗವಾಗಿ ಮಾತಾಡುತ್ತಿದ್ದ. ಹನ್ನೊಂದರ ಹುಡುಗ ತನ್ನ ಖಾಸಗಿ ಗುರುವಿನೊಡನೆ ಯೂರೊಪಿನಾದ್ಯಂತ ಪ್ರವಾಸ ಮುಗಿಸಿದ. ಹದಿನಾಲ್ಕರ ಹರೆಯದಲ್ಲಿ ಗೆಲಿಲಿಯೋನ ಸಂಶೋಧನೆಗಳನ್ನು ಅಭ್ಯಸಿಸಿದ್ದ. ಖಾಸಗಿ ಗುರುವಿನಿಂದ ಕಲಿತಷ್ಟೆ ಪಾಠ. ಈತನ ಶ್ರೀಮಂತ ತಂದೆ 1645ರಲ್ಲಿ ಗತಿಸಿದಾಗ ಬಾಯ್ಲನಿಗೆ ಸ್ಪಂತ ವರಮಾನ ದೊರೆಯಿತು. ಈ ಘಟ್ಟದಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಅಂತರ್ಯುದ್ಧ ಆರಂಭವಾಯಿತು. ರಾಜಕೀಯ ಕಾರಣಗಳಿಗಾಗಿ ಐರ್ಲೆಂಡಿನ ಸರ್ಕಾರ ಬಾಯ್ಲನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು. ಭಿಕಾರಿಯಾಗಿ ಲಂಡನ್ ತಲುಪಿದ ಬಾಯ್ಲನಿಗೆ ಅಕ್ಕ ಆಶ್ರಯವಿತ್ತಳು. ಆಕೆಯ ರಾಜಕೀಯ ಪ್ರಭಾವದಿಂದ ಬಾಯ್ಲ್ ಸೇನೆ ಸೇರುವುದು ತಪ್ಪಿ ಆಕ್ಸ್‍ಫರ್ಡಿನಲ್ಲಿ ನೆಲಸುವುದು ಸಾಧ್ಯವಾಯಿತು (1654).

ವಿಜ್ಞಾನದಲ್ಲಿ ಪ್ರಾಯೋಗಿಕ ಮಾರ್ಗ ಪ್ರವರ್ತಿಸಿದಾತ ಫ್ರಾನ್ಸಿಸ್ ಬೇಕನ್ (1561-1626). ಅದರ ನಾಟಕೀಯ ಬೆಳೆವಣೆಗೆಗೆ ಗೆಲಿಲಿಯೊ (1564-1642) ಕಾರಣ, ಈ ಪಂಥದ ಅಭಿಮಾನಿಗಳಾದ ಪ್ರಯೋಗನಿರತ ವಿಜ್ಞಾನಿಗಳೆಲ್ಲ ಒಂದೆಡೆ ಸಭೆ ಸೇರುತ್ತಿದ್ದರು. ಬಾಯ್ಲನೂ ಇದರಲ್ಲಿ ಭಾಗವಹಿಸುತ್ತಿದ್ದ. ಮುಂದೆ ಇದೇ ಸಂಘ ರಾಯಲ್ ಸೊಸೈಟಿ ಎಂದು ವಿಧ್ಯುಕ್ತವಾಗಿ ಮನ್ನಿಸಲ್ಪಟ್ಟಿತು (1663).

ಬಾಯ್ಲನ ಪ್ರಯೋಗಶೀಲತೆ ಅವನ ಸಂಪ್ರದಾಯಸ್ಥ ಮಿತ್ರರಿಗೆ ಹಿಡಿಸಲಿಲ್ಲ. ಪ್ರಯೋಗಕ್ಕಿಂತ ತರ್ಕ ಮುಖ್ಯ ಎಂಬುದು ಅವರ ವಾದ. ರಸಾಯನಿಕ ಸಿದ್ಧಾಂತಗಳಿಗೆ ಯುಕ್ತ ಹಿನ್ನೆಲೆ ಒದಗಿಸುವುದರ ಮೂಲಕ ಪ್ರಕೃತಿದರ್ಶನ ಶಾಸ್ತ್ರವು ಅದಕ್ಕೆ ಪ್ರಯೋಗಗಳನ್ನು ನೀಡಿ ರಸಾಯನವಿಜ್ಞಾನವೂ ಪರಸ್ಪರ ಪ್ರಯೋಜನ ಹೊಂದಿ ಕೂಡಿ ಬಾಳಿದರೆ ಒಳಿತು ಎಂಬುದು ಬಾಯ್ಲನ ಆಶಯವಾಗಿತ್ತು. ಅದಕ್ಕಾಗಿ ಅವನು ಕೊನೆಯತನಕವೂ ದುಡಿದ.

1657ರಲ್ಲಿ ಬಾಯ್ಲ್ ಆ ವೇಳೆಗಾಗಲೇ ಗೇರಿಕ (1602-86) ನಿರ್ಮಿಸಿದ್ದ  ವಾಯುರೇಚಕದ ಸುಧಾರಿತ ನಮೂನೆಯನ್ನು ಪ್ರದರ್ಶಿಸಿದ. ಅದರಲ್ಲಿ ನಿದ್ರ್ರವ್ಯತೆ (ವ್ಯಾಕೂಮ್) ಸೃಷ್ಟಿಸಿದ್ದ. ನಿಸರ್ಗ ನಿದ್ರ್ರವ್ಯತೆಯನ್ನು ದ್ವೇಷಿಸುತ್ತದೆ. ಎಂಬ ಅರಿಸ್ಟಾಟಲ್ ಪ್ರಣೀತ ಸಿದ್ಧಾಂತ ಮೂಲೆಗುಂಪಾಯಿತು. ವಾಯು ನಿರೋಧವಿಲ್ಲದೆ ನಿದ್ರ್ರವ್ಯತೆಯಲ್ಲಿ ಸಮಸ್ತ ಪದಾರ್ಥಗಳು ಏಕಕಾಲದಲ್ಲಿ ಪತನವಾಗುವುವು ಎಂದು ಗೆಲಿಲಿಯೊ ಪ್ರತಿಪಾದಿಸಿದ್ದ. ಇದರ ಪ್ರಕಾರ ನಿದ್ರ್ರವ್ಯತೆಯಲ್ಲಿ ಹಕ್ಕಿಯಗರಿಯೂ ಸೀಸದ ತುಂಡೂ ಸಮ ವೇಗದಲ್ಲಿ ತಳ ಸೇರಿದುವು. ಬಾಯ್ಲನ ಈ ಪ್ರಯೋಗದಿಂದ ಗೆಲಿಲಿಯೊ ಹೇಳಿದ್ದು ಸರಿ ಎಂದು ರುಜುವಾತಾಯಿತು. ಅಲ್ಲದೆ ನಿದ್ರ್ರವ್ಯತೆಯ ಮೂಲಕ ಶಬ್ದ ಪ್ರಸಾರವಾಗುವುದಿಲ್ಲ (ಉದಾಹರಣೆಗೆ ಗಡಿಯಾರದ ಟಿಕ್ ಟಿಕ್ ಶಬ್ದ). ಆದರೆ ವಿದ್ಯುದಾಕರ್ಷಣೆಗೆ ಅದು ಅಡ್ಡಿ ಮಾಡದು ಎಂಬುದನ್ನೂ ಪ್ರದರ್ಶಿಸಿದ.

ಅನಿಲವನ್ನು ಮೊತ್ತಮೊದಲು ಸಂಗ್ರಹಿಸಿದಾತ ಬಾಯ್ಲ್. ಒತ್ತಡ ಹೇರಿ ವಾಯುಗಾತ್ರ ಕುಗ್ಗಿಸಬಹುದು. ನಿಯತ ಉಷ್ಣತೆಯಲ್ಲಿರುವ ವಾಯುಗಾತ್ರಕ್ಕೂ ಅದು ಗುರಿಯಾಗಿರುವ ಒತ್ತಡಕ್ಕೂ ಸರಳ ವಿಲೋಮ ಸಂಬಂಧವಿದೆ ಎಂಬುದು ಬಾಯ್ಲ್‍ನ ಮತ್ತೊಂದು ಪ್ರಯೋಗ. ಇದನ್ನು ಸಮರ್ಥಿಸಲು ಸುಮಾರು 510 ಸೆಂಮೀ ಉದ್ದವಿದ್ದ ಎ- ಆಕಾರದ ನಾಳ ತೆಗೆದುಕೊಂಡ. ಮುಚ್ಚಿದ ಗಿಡ್ಡತುದಿ ವಾಯುಬಂಧಿತವಾಗಿತ್ತು. ತೆರೆದ ನೀಳಭಾಗಕ್ಕೆ ಪಾದರಸ ಸುರಿದು ವಾಯುವಿನ ಮೇಲೆ ಅಪೇಕ್ಷಿತ ಒತ್ತಡ ಹೇರಬಹುದಾಗಿತ್ತು. ಹೀಗೆ ಒತ್ತಡವನ್ನು ದ್ವಿಗುಣಗೊಳಿಸಿದಾಗ ವಾಯುಗಾತ್ರ ಅರ್ಧವಾಯಿತು. ಒತ್ತಡ ತ್ರಿಗುಣಿತವಾದಾಗ ವಾಯುಗಾತ್ರ ಮೂರು ಪಟ್ಟು ಕುಗ್ಗಿತು. ಒತ್ತಡ ಇಳಿಸಿದಾಗಲೂ ಇದೇ ರೀತಿಯ ಫಲಿತಾಂಶ ದೊರೆಯಿತು. ಇದೇ ಪ್ರಸಿದ್ಧವಾದ ಬಾಯ್ಲನ ನಿಯಮ.

ಹೀಗೆ ವಾಯುಗಾತ್ರ ಕುಗ್ಗಿಸಬಹುದಾದರೆ ಅದರಲ್ಲಿ ಸೂಕ್ಷ್ಮಕಣಗಳಿವೆ. ಅವುಗಳ ನಡುವೆ ಖಾಲಿ ಜಾಗವಿದೆ. ಒತ್ತಡ ಹೇರಿದಾಗ ಕಣಗಳು ಹತ್ತಿರ ಬರುತ್ತವೆ ಎಂದಾಯಿತು. ಇದರಿಂದ ಎರಡು ಸಾವಿರ ವರ್ಷಗಳ ಹಿಂದೆ ಡೆಮಾಕ್ರಿಟಸ್ ಮಂಡಿಸಿದ್ದ ಪರಮಾಣುವಾದಕ್ಕೆ ಪುನಶ್ಚೇತನ ದೊರೆಯಿತು.

ಬಾಯ್ಲನ ಪ್ರಯೋಗಗಳ ವರದಿ ಕರಾರುವಾಕ್ಕಾಗಿರುತ್ತಿದ್ದುವು. ಯಾರು ಬೇಕಾದರೂ ಅವನ್ನು ಪುನರಾವರ್ತಿಸಿ ಖಚಿತಪಡಿಸಿಕೊಳ್ಳಬಹುದಾಗಿತ್ತು. ಈತನ ಪ್ರಯೋಗ ಪದ್ಧತಿಯಿಂದಾಗಿ ರಸಾಯನವಿಜ್ಞಾನ ಕಂದಾಚಾರಗಳಿಂದ ಮುಕ್ತವಾಯಿತು. ಅದು ಪ್ರಕೃತಿದರ್ಶನಶಾಸ್ತ್ರದ ಒಂದು ಉಪಶಾಖೆ. ಅದರಲ್ಲಿ ನಿಗೂಢ ವಿವರಣೆಗಳಿಗೆ ಸ್ಥಾನವಿಲ್ಲ. ಪ್ರಯೋಗ ಮಾರ್ಗದಿಂದ ವ್ಯಕ್ತವಾದಷ್ಟನ್ನು ಮಾತ್ರ ಒಪ್ಪಬೇಕು. ಫಲಿತಾಂಶಗಳು ನಿಸ್ಸಂಶಯವಾಗಿ ಸೂಚಿಸುವ ನಿಯಮಗಳು ಮತ್ತು ಸಿದ್ಧಾಂತಗಳು ಕಂಡುಬಂದರೆ ಅವು ಪರಿಶೀಲನಾರ್ಹ ಮತ್ತು ಅನುಷ್ಠಾನ ಯೋಗ್ಯ. ಇದೇ ವೈಜ್ಞಾನಿಕ ಮನೋಧರ್ಮ ಎಂದು ಅವನು ನಂಬಿದ್ದ. ಪರಿಣಾಮವಾಗಿ, ರಾಸಾಯನಿಕ ಪದಾರ್ಥಗಳು ಏಕೆ ವರ್ತಿಸುವುವು ಎಂಬುದು ಮುಖ್ಯವಾಗಿರದೆ ಹೇಗಿ ವರ್ತಿಸುವುವು ಎಂಬುದರ ಕಡೆಗೆ ಲಕ್ಷ್ಯಕೊಡುವಂತಾಯಿತು.

1661ರಲ್ಲಿ ಅವನು ಹಸ್ತಪ್ರತಿಯ ರೂಪದಲ್ಲಿ ಪ್ರಕಟಿಸಿದ ಸಂಶಯಗ್ರಸ್ತ ರಸಾಯನ ವಿಜ್ಞಾನಿ (ಸ್ಕೆಪ್ಟಿಕಲ್ ಕೆಮಿಸ್ಟ್) ಎಂಬ ಪುಸ್ತಕದ ದೆಸೆಯಿಂದ ರಸವಾದಕ್ಕೆ ರಸಾಯನವಿಜ್ಞಾನ ಎಂಬ ಅಂತಸ್ತು ಪ್ರಾಪ್ತವಾಯಿತು. ಅದರಲ್ಲಿ ಈತ ನಿಸರ್ಗ ಕೆಲವೇ ಕೆಲವು ಮೂಲ ತತ್ತ್ವಗಳಿಂದ ಧಾತುಗಳನ್ನು ಸೃಷ್ಟಿಸಿದೆ ಎಂಬ ಗ್ರೀಕರ ವಾದವನ್ನು ಖಂಡಿಸಿದ್ದ. ಬದಲಾಗಿ ಧಾತುವೆಂಬುದು ನಿರ್ದಿಷ್ಟ ಪದಾರ್ಥ, ಪ್ರಯೋಗದಿಂದ ಮಾತ್ರ ಇದನ್ನು ಗುರುತಿಸಬಹುದು, ಇದನ್ನು ಇನ್ನೂ ಸರಳ ಪದಾರ್ಥಗಳಿಗೆ ವಿಭಜಿಸಲಾಗದು, ಎರಡು ಅಥವಾ ಹೆಚ್ಚು ಧಾತುಗಳ ಮಿಲನದಿಂದ ಸಂಯುಕ್ತಗಳು ರೂಪುಗೊಳ್ಳುತ್ತವೆ. ಸಂಯುಕ್ತಗಳನ್ನು ವಿಭಜಿಸಿ ಅವುಗಳಲ್ಲಿರುವ ಧಾತುಗಳನ್ನು ಮರಳಿ ಪಡೆಯಬಹುದು ಎಂದು ಬಾಯ್ಲ್ ಪ್ರತಿಪಾದಿಸಿದ.

ಮೂತ್ರದಿಂದ ರಂಜಕ ತಯಾರಿಸಿದುದು (1680) ಬಾಯ್ಲನ ಇನ್ನೊಂದು ಸಾಧನೆ. ಹತ್ತು ವರ್ಷಗಳ ಹಿಂದೆಯೆ ಬ್ರ್ಯಾಂಡ್ ರಂಜಕ ತಯಾರಿಸಿದ್ದರೂ ಅವನು ಈ ಆವಿಷ್ಕಾರ ಪ್ರಕಟಿಸಿರಲಿಲ್ಲ. ಹೀಗಾಗಿ ರಂಜಕ ಪತ್ತೆ ಮಾಡಿದ ಗೌರವ ಯಾರಿಗೆ ಸಲ್ಲಬೇಕೆಂಬ ವಿವಾದ ಎದ್ದಿತು. ಬಾಯ್ಲ್ ಮಾತ್ರ ಇದರಲ್ಲಿ ಭಾಗಿಯಾಗದೆ ನಿರ್ಲಿಪ್ತನಾಗಿಯೇ ಇದ್ದ. ಯಾರೇ ಆಗಲಿ ತಮ್ಮ ಪ್ರಯೋಗ ಫಲಿತಾಂಶಗಳನ್ನು ಸ್ಪಷ್ಟವಾಗಿ ಆದಷ್ಟು ಜಾಗ್ರತೆ ಸಾರಸ್ವತ ಲೋಕದ ಗಮನಕ್ಕೆ ತರುವುದು ಉಭಯತ್ರರಿಗೂ ಒಳ್ಳೆಯದು. ಇತರರು ಅದೇ ಪ್ರಯೋಗಗಳನ್ನು ಪುನರಾವರ್ತಿಸಿ ಫಲಿತಾಂಶಗಳ ಸತ್ಯಾಸತ್ಯತೆ ಪರೀಕ್ಷಿಸಬಹುದು. ಇದರಿಂದ ವಿಜ್ಞಾನದ ಮುನ್ನಡೆಗೆ ಅನುಕೂಲ. ಇದು ಅವನ ದೃಢ ನಂಬಿಕೆ. ಎಲ್ಲ ಲೋಹಗಳು ಸಂಯುಕ್ತಗಳೆಂದು ಆಗ ಭಾವಿಸಿದ್ದರು. ಆದರೆ ಬಾಯ್ಲ್ ಇದನ್ನು ಒಪ್ಪಲಿಲ್ಲ. ಲೋಹಗಳು ಒಂದು ವಿಶಿಷ್ಟ ಜಾತಿಯ ಪದಾರ್ಥಗಳೆಂಬುದು ನಿಜ. ಆದರೆ ಸಂಯುಕ್ತಗಳಲ್ಲ. ಖನಿಜಾಮ್ಲಗಳೊಡನೆ ಅವು ವರ್ತಿಸಿದಾಗ ವಿವಿಧ ವರ್ಗದ ಲವಣಗಳು ಹುಟ್ಟುತ್ತವೆ. ಉದಾಹರಣೆಗೆ ತಾಮ್ರವನ್ನು ವಿಟ್ರಿಯಲ್ ತೈಲದಲ್ಲಿ (ಸಲ್ಫ್ಯೂರಿಕ್ ಆಮ್ಲ) ಲೀನಮಾಡಿದಾಗ ನೀಲಿ ವಿಟ್ರಿಯಲ್ (ಮೈಲುತುತ್ತ ಅಥವಾ ತಾಮ್ರದ ಸಲ್ಫೇಟ್), ಕಬ್ಬಿಣವನ್ನು ಲೀನಮಾಡಿದಾಗ ಹಸಿರು ವಿಟ್ರಿಯಲ್ (ಫೆರಿಸ್ ಸಲ್ಫೇಟ್) ಎಂಬ ಭಿನ್ನ ಲವಣಗಳು ಉಂಟಾದುವು.

ಈ ನಡುವೆ ಜರ್ಮನಿಯ ರಸಾಯನ ವಿಜ್ಞಾನಿಯೊಬ್ಬ ಆಮ್ಲ ಕ್ಷಾರಗಳ ಸಿದ್ಧಾಂತ ಸ್ಥಾಪಿಸಲು ಹೊರಟಿದ್ದ. ಅವನ ಪ್ರಕಾರ ಎಲ್ಲ ಪದಾರ್ಥಗಳನ್ನೂ ಆಮ್ಲ ಅಥವಾ ಕ್ಷಾರಗಳಾಗಿ ವಿಂಗಡಿಸಬಹುದು. ಎಲ್ಲ ರಾಸಾಯನಿಕ ಕ್ರಿಯೆಗಳೂ ಮೂಲತಃ ತಟಸ್ಥೀಕರಣವೇ. ಬಾಯ್ಲ್ ಇದನ್ನು ಅಲ್ಲಗಳೆದ. ಆಮ್ಲ ಕ್ಷಾರಗಳೆಂಬ ವರ್ಗದ ಪದಾರ್ಥಗಳಿವೆ ನಿಜ. ಆದರೆ ಎಲ್ಲ ಪದಾರ್ಥಗಳನ್ನೂ ಹೀಗೆ ವರ್ಗೀಕರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಕ್ಷಾರಗಳಲ್ಲೇ ಭಿನ್ನವರ್ಗಗಳಿವೆ : ಸಸ್ಯಮೂಲಗಳಿಂದ ಪಡೆದ ಕಾರ್ಬೊನೇಟುಗಳು ಮತ್ತು ಪ್ರಾಣಿ ಮೂಲಗಳಿಂದ ತಯಾರಿಸಿದ ಅಮೋನಿಯಮ್ ಸಂಯುಕ್ತಗಳು. ಇವು ರಸಕರ್ಪೂರದ ದ್ರಾವಣದೊಡನೆ ಬೇರೆ ಬೇರೆ ಪ್ರತಿಕ್ರಿಯೆ ತೋರಿಸುತ್ತಿದ್ದುವು. ಅಲ್ಲದೆ ಆಮ್ಲದ ಸಂಪರ್ಕದಲ್ಲಿ ಒಂದು ಬಣ್ಣವನ್ನೂ ಕ್ಷಾರಗಳ ಸಂಪರ್ಕದಲ್ಲಿ ಮತ್ತೊಂದು ಬಣ್ಣವನ್ನೂ ಹೊಂದಿರುತ್ತಿದ್ದ ಸೂಚಕಗಳು ಕೆಲವು ಪದಾರ್ಥಗಳ ಮೇಲೆ ಏನೂ ಪರಿಣಾಮ ಬೀರುತ್ತಿರಲಿಲ್ಲ. ಆದ್ದರಿಂದ ತಟಸ್ಥ ಸ್ವಭಾವದ ಬೇರೊಂದು ವರ್ಗದ ಸಂಯುಕ್ತಗಳು ಇರಲೇಬೇಕೆಂದು ಗೊತ್ತಾಯಿತು.

ಆಮ್ಲ ಕ್ಷಾರಗಳನ್ನು ಗುರುತಿಸಲು ಸೂಚಕಗಳನ್ನು ಉಪಯೋಗಿಸುವಂತೆ ಇತರ ರಾಸಾಯನಿಕ ಪದಾರ್ಥಗಳನ್ನು ಗುರುತಿಸುವ ಸೂಕ್ಷ್ಮ ವಿಧಾನಗಳನ್ನು ಬಳಕೆಗೆ ತಂದವ ಬಾಯ್ಲ್. ಪದಾರ್ಥದ ಸಾಪೇಕ್ಷ ಸಾಂದ್ರತೆ, ಹರಳು ರೂಪ ಮೊದಲಾದ ಭೌತಗುಣಗಳನ್ನೂ ಕೆಲವು ರಾಸಾಯನಿಕ ಗುಣಗಳನ್ನೂ ಈ ಪರೀಕ್ಷಾ ಪ್ರಯೋಗಗಳು ಅವಲಂಬಿಸಿದ್ದುವು. ಉದಾಹರಣೆಗೆ, ತಾಮ್ರದ ಸಂಯುಕ್ತಗಳನ್ನು ಆಮ್ಲ ಅಥವಾ ಕ್ಷಾರಗಳಲ್ಲಿ ಲೀನ ಮಾಡಿದರೆ ದ್ರಾವಣ ಹಸಿರು ಅಥವಾ ನೀಲಿ ಬಣ್ಣ ತಳೆಯುತ್ತದೆ. ಬೆಂಕಿಯಲ್ಲಿ ಹಿಡಿದಾಗ ಹಸಿರು ಬಣ್ಣ ಸೂಚಿಸುತ್ತದೆ. ಬೆಳಕಿನ ಸಂಪರ್ಕದಲ್ಲಿ ಬೆಳ್ಳಿಯ ಕ್ಲೋರೈಡ್ ಕಪ್ಪಾಗುತ್ತದೆ ಇತ್ಯಾದಿ.

ಬಾಯ್ಲನ ಪ್ರಯೋಗ ಶಾಲೆಯಲ್ಲಿ ಉತ್ಸಾಹಿ ತರುಣ ಸಂಶೋಧಕರ ಒಂದು ತಂಡವೇ ಇತ್ತು. ಅವರಲ್ಲಿ ಹುಕ್, ಡೆನಿಸ್, ಪಾಪಿನ್, ಬೆಕರ್ ಮತ್ತು ಹೋಂಬರ್ಗ್ ಪ್ರಮುಖರು.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ